ಪ್ಯಾಂಡ - 
ಕಾರ್ನಿವೊರ ಗಣದ ಪ್ರೋಸಯಾನಿಡೀ ಕುಟುಂಬಕ್ಕೆ ಸೇರಿದ ಚತುಷ್ಪಾದಿ ಸ್ತನಿ. ರಕೂನ್, ಕೋಟಿಮುಂಡಿ, ಕಿಂಕಜೂ ಮುಂತಾದ ಪ್ರಾಣಿಗಳಿಗೆ ಹತ್ತಿರ ಸಂಬಂಧಿ. ಇದರಲ್ಲಿ ವಾಸ್ತವವಾಗಿ ಎರಡು ಬಗೆಗಳುಂಟು. ಚೀನದ ಯೂನಾನ್ ಪ್ರದೇಶ, ಉತ್ತರ ಬರ್ಮ, ಸಿಕ್ಕಿಮ್ ಹಾಗೂ ನೇಪಾಳಗಳಲ್ಲಿ ವಾಸಿಸುವ ಕಿರುಪ್ಯಾಂಡ (ಲೆಸರ್ ಪ್ಯಾಂಡ ಮತ್ತು ರೆಡ್ ಪ್ಯಾಂಡ) ಒಂದು ಬಗೆಯಾದರೆ ಚೀನದ ಸೆಕ್ವಾನ್, ಸೈಕಾಂಗ್, ಷೆನಾಷಾನ್, ಕ್ಯಾನ್ಸು ಪ್ರಾಂತ್ಯಗಳಲ್ಲೂ ಟಿಬೆಟ್ಟಿನ ಕೆಲವು ಪ್ರದೇಶಗಳಲ್ಲೂ ಕಾಣದೊರೆಯುವ ದೈತ್ಯ ಪ್ಯಾಂಡ (ಜೆಯೆಂಟ್ ಪ್ಯಾಂಡ, ರೆನ್‍ಸೆನ್ ಪ್ಯಾಂಡ) ಇನ್ನೊಂದು ಬಗೆ. ಇವಕ್ಕೆ ಅನುಕ್ರಮವಾಗಿ ಐಲ್ಯೂರಸ್ ಫಲ್ಗೆನ್ಸ್ ಮತ್ತು ಐಲ್ಯೂರೊಪೊಡ ಮೆಲನೋಲ್ಯೂಕ ಎಂಬ ವೈಜ್ಞಾನಿಕ ಹೆಸರುಗಳುಂಟು. 

ಮೊದಲನೆಯದು ಹೆಸರೇ ಹೇಳುವಂತೆ ಸಣ್ಣ ಗಾತ್ರದ ಪ್ರಾಣಿ. ಇದರ ದೇಹದ ಉದ್ದ 51-65 ಸೆಂ.ಮೀ. ತೂಕ 3-4.5 ಕೆ.ಜಿ. 28-45 ಸೆಂ.ಮೀ. ಉದ್ದದ ಬಾಲವುಂಟು. ದೇಹದ ಮೇಲೆ ಉದ್ದನೆಯ ಹಾಗೂ ಮೃದುವಾದ ತುಪ್ಪುಳ ಇದೆ. ಬಾಲ ಪೊದೆಯಂತಿದೆ. ದೇಹದ ಬಣ್ಣ ಚೆಸ್ಟ್‍ನಟ್ ಕಂದು. ಬಾಲದ ಮೇಲೆ ಮಸಕುಮಸಕಾಗಿ ಕಾಣುವ ಪಟ್ಟೆಗಳುಂಟು. ಕಣ್ಣುಗಳ ಕೆಳಗೆ ಕೆನ್ನೆಯನ್ನೂ ಸೇರಿಕೊಂಡಂತೆ ಕರಿಯ ಬಣ್ಣದ ಮಚ್ಚೆಗಳಿವೆ. ಮುಸುಡು, ಕಿವಿಯ ಅಂಚು, ಕೆನ್ನೆಗಳು ಸ್ವಲ್ಪ ಭಾಗ ಬಿಳಿ, ತಲೆ ಹೆಚ್ಚು ಕಡಿಮೆ ದುಂಡಾಗಿದೆ. ಕಿವಿಗಳು ದೊಡ್ಡವು, ಚೂಪು ತುದಿಯುಳ್ಳವು, ಅಂಗಾಲುಗಳ ಮೇಲೆ ಕೂದಲುಗಳಿವೆ. 

ಇದು ಹೆಚ್ಚುಕಡಿಮೆ ನಿಶಾಚರಿ. ಸಾಮಾನ್ಯವಾಗಿ ಹಗಲಿನಲ್ಲಿ ಮರಗಳನ್ನು ಹತ್ತಿ ನಿದ್ರಿಸುತ್ತದೆ. ಮಲಗಿರುವಾಗ ಬೆಕ್ಕಿನಂತೆ ನಾಯಿಯಂತೆ ಸುರುಳಿ ಸುತ್ತಿರುವುದುಂಟು. ಕೆಲವೊಮ್ಮೆ ಮುಂಗಾಲುಗಳ ನಡುವೆ ಎದೆಯ ಮೇಲೆ ಬಾಗಿರುವಂತೆ ತಲೆಯನ್ನಿಟ್ಟುಕೊಂಡು ನಿದ್ರಿಸುವುದೂ ಇದೆ. 

ಕಿರುಪ್ಯಾಂಡ ಸಾಧು ಸ್ವಭಾವದ ಪ್ರಾಣಿ. ಸುಲಭವಾಗಿ ಪಳಗಿಸಬಹುದು. ಆಗಾಗ ಸಿಳ್ಳೆ ಹಾಕಿದಂತೆ ಕೂಗುತ್ತ ಓಡಾಡಿಕೊಂಡು ಇರುತ್ತದೆ. ಕೆಣಕಿದಾಗ ಹಿಂಗಾಲುಗಳ ಮೇಲೆ ನಿಂತು ಬುಸುಗುಟ್ಟುತ್ತದೆ. ಆಗ ಗುದದಿಂದ ಒಂದು ತೆರನ ಕಟುವಾಸನೆಯನ್ನು ಹೊರಸೂಸುವುದು.

ಬಿದಿರು ಕಳಿಲೆ, ಕಂದ ಮೂಲಾದಿಗಳು, ಹಣ್ಣುಗಳು, ಇದರ ಪ್ರಧಾನ ಆಹಾರ. ಕೆಲವೊಮ್ಮೆ ಮೊಟ್ಟೆಗಳನ್ನು ದಂಶಕಗಳನ್ನೂ ಹಕ್ಕಿಗಳನ್ನೂ ತಿನ್ನುವುದುಂಟು. 

ಕಿರುಪ್ಯಾಂಡಗಳು ಸಾಮಾನ್ಯವಾಗಿ ಜೊತೆಜೊತೆಯಾಗಿಯೋ ಇಲ್ಲವೆ ಸಣ್ಣ ಗುಂಪುಗಳಲ್ಲಿಯೋ ಇರುವುವು. ಮರಿಗಳನ್ನು ಈಯುವ ಕಾಲ ವಸಂತ. ಒಂದು ಸೂಲಿಗೆ ಒಂದು ಇಲ್ಲವೇ ಎರಡು ಮರಿಗಳು ಹುಟ್ಟುವುವು. ಮರದ ಪೊಟರೆಗಳೊ ಬಂಡೆಗಳ ಸಂದುಗಳೊ - ಇವೇ ಮರಿಗಳನ್ನು ಹಾಕುವ ತಾಣಗಳು. ಮರಿಗಳಿಗೆ ವಯಸ್ಕ ಪ್ಯಾಂಡಗಳ ಗಾಢ ಬಣ್ಣ ಇರದು. ಹುಟ್ಟಿದ 21-30 ದಿವಸಗಳವರೆಗೆ ಮರಿಗಳಿಗೆ ದೃಷ್ಟಿ ಸಾಮಥ್ರ್ಯ ಇರುವುದಿಲ್ಲ. ಸುಮಾರು ಒಂದು ವರ್ಷ ವಯಸ್ಸಾಗುವವರೆಗೆ ಮರಿಗಳು ತಾಯೊಡನೆಯೇ ಇದ್ದು ಅನಂತರ ಬೇರೆ ಹೋಗುವುವು.

ದೈತ್ಯ ಪ್ಯಾಂಡದ ಗಾತ್ರ ಹಿರಿದು. ವಯಸ್ಕ ಪ್ರಾಣಿಗಳು 12-1.5 ಮೀ ಉದ್ದ ಇರುವುವು : 75-160 ಕೆ.ಜಿ. ತೂಗುವುವು. ಮೈಮೇಲೆ ಉಣ್ಣೆಯಂಥ ಮಂದ ತುಪ್ಪುಳ ಉಂಟು. ದೇಹದ ಬಣ್ಣ ಬಿಳಿ. ಕಿವಿ, ಕಾಲುಗಳು, ಭುಜದ ಅಡ್ಡಪಟ್ಟಿ ಹಾಗೂ ಕಣ್ಣುಗಳ ಸುತ್ತಣ ಭಾಗಗಳು ಕಪ್ಪು ಬಣ್ಣದವು. ದೈತ್ಯ ಪ್ಯಾಂಡವನ್ನು ಕರಡಿಯ ಸಂಬಂಧಿ ಎನ್ನುವುದಿದೆಯಾದರೂ ಇದು ನಿಜಕ್ಕೂ ರಕೂನ್ ಪ್ರಾಣಿಯ ನಿಕಟ ಸಂಬಂಧಿ.
ಇದು ಸಾಮಾನ್ಯವಾಗಿ ಒಂಟಿಯಾಗಿ ಇರುವ ಪ್ರಾಣಿ. ಸಂತಾನವೃದ್ಧಿ ಶ್ರಾಯದಲ್ಲಿ ಮಾತ್ರ ಜೊತೆಗೂಡಿ ವಾಸಿಸುತ್ತದೆ. ಇದರ ಪ್ರಧಾನ ಅಹಾರ ಬಿದಿರು ಕಳಿಲೆ ಹಾಗೂ ಬೇರು. ಇನ್ನಿತರ ಗಿಡಗೆಂಟೆಗಳನ್ನೂ ಆಗೊಮ್ಮೆ ಈಗೊಮ್ಮೆ ಮೀನು ದಂಶಕ ಇತ್ಯಾದಿ ಪ್ರಾಣಿಗಳನ್ನೂ ಸೇವಿಸುವುದುಂಟು. ಸಂತಾನವೃದ್ಧಿ ಶ್ರಾಯ ವಸಂತ. ಸಾಲಿಗೆ 1-2 ಮರಿಗಳು ಹುಟ್ಟುವುವು. 4-10 ವರ್ಷಗಳ ಅನಂತರ ಲೈಂಗಿಕ ಪ್ರಬುದ್ಧತೆ ಬರುವುದು.

ದೈತ್ಯ ಪ್ಯಾಂಡವನ್ನೂ ಸುಲಭವಾಗಿ ಸಾಕಬಹುದು.
(ಜೆ.ಆರ್.ವಿ.)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ